ಮಂಡ್ಯ: ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಇಬ್ಬರೂ ಅನಿವಾರ್ಯವಾಗಿದ್ದಾರೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು.
ಆ ಸಮಯದಲ್ಲೇ ವಿಜಯೇಂದ್ರ ಅವರಿಗೆ ಉತ್ತಮ ಸ್ಥಾನ ಕೊಡಬೇಕಿತ್ತು. ಕೊಡಲಿಲ್ಲ. ಬಿಜೆಪಿ ಪ್ರಯೋಗಗಳು ನೆಲಕಚ್ಚಿದವು. ಬಿಜೆಪಿಯೊಳಗೆ ಮನಸ್ಸುಗಳೆಲ್ಲಾ ಒಡೆದುಹೋಗಿವೆ. ಅವರೀಗ ಗೊಂದಲದಲ್ಲಿದ್ದಾರೆ. ಕಳೆದ ಆರು ತಿಂಗಳಿಂದ ವಿರೋಧ ಪಕ್ಷದ ನಾಯಕರು ಅವರಿಗೆ ಸಿಕ್ಕಿಲ್ಲ. ಈಗ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಅಲ್ಲಿಗೆ ಯಡಿಯೂರಪ್ಪ ಮತ್ತು ಅವರ ಕುಟುಂಬ ಬಿಜೆಪಿಗೆ ಅನಿವಾರ್ಯವಾಗಿದೆ ಎಂದು ಕುಟುಕಿದರು.
ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗುವುದು ಕಷ್ಟವಿದೆ. ಅವರೇನು ಪ್ರೀತಿಯಿಂದ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೂರಿಸಿಲ್ಲ. ಅನಿವಾರ್ಯದಿಂದ ಮಾಡಿದ್ದಾರೆ ಅಷ್ಟೆ. ಕುಮಾರಸ್ವಾಮಿ ಅವರೂ ಪ್ರೀತಿಯಿಂದ ಬಿಜೆಪಿಗೆ ಹೋಗಿಲ್ಲ. ಅನಿವಾರ್ಯವಾಗಿ ಹೋಗಿದ್ದಾರೆ. ಇಂತಹ ಸಮಯದಲ್ಲಿ ಬಿಜೆಪಿ ಕಷ್ಟ ನೋಡಿ ಅಯ್ಯೋ ಪಾಪ ಎನಿಸುತ್ತಿದೆ. ಬಿಜೆಪಿಯೊಳಗೆ ಮನಸ್ತಾಪ ದೊಡ್ಡ ಪ್ರಮಾಣದಲ್ಲಿರುವುದರಿಂದ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗುವುದು ಕಷ್ಟವಾಗಲಿದೆ ಎಂದು ಭವಿಷ್ಯ ನುಡಿದರು.