ಮಂಗಳೂರು: ”ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ 2024ರ ಜನವರಿ 22ರಿಂದ ಮಾರ್ಚ್ 10ರವರೆಗೆ 48 ದಿನಗಳ ಕಾಲ ನಡೆಯಲಿದೆ,” ಎಂದು ಶ್ರೀರಾಮ ಮಂದಿರದ ವಿಶ್ವಸ್ಥರಾಗಿರುವ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಆಶ್ರಯದಲ್ಲಿ ಕದ್ರಿಯ ಮಂಜುಪ್ರಾಸಾದದಲ್ಲಿ ಸಾರ್ವಜನಿಕ ಗೋಪೂಜೆ ಉತ್ಸವದ ಸಾನ್ನಿಧ್ಯ ವಹಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಜನವರಿ 2ರಂದು ಅಭಿಜಿನ್ ಮುಹೂರ್ತದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಶ್ರೀರಾಮನ ಭವ್ಯ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ್ಳಲು ಸಾಧ್ಯವಾಗಲಾರದು. ಉಳಿದ 48 ದಿನಗಳ ಮಂಡಲೋತ್ಸವದಲ್ಲಿ ದೇಶದ ಎಲ್ಲಜನತೆ ಪಾಲ್ಗೊಳ್ಳುವಂತೆ ಮುಕ್ತ ಆಹ್ವಾನ ನೀಡುವುದಾಗಿ ಸ್ವಾಮೀಜಿ ಹೇಳಿದರು.
‘ಅಯೋಧ್ಯೆಯಲ್ಲಿ ಶ್ರೀರಾಮನ ಶಿಲಾ ವಿಗ್ರಹ ಸಿದ್ಧಗೊಳ್ಳುತ್ತಿದ್ದು, ಜನವರಿ 17ರಂದು ಅಯೋಧ್ಯೆಗೆ ವಿಗ್ರಹದ ಮೆರವಣಿಗೆ ನಡೆಯಲಿದೆ. ಪವಿತ್ರ ಸರಯೂ ನದಿಯಲ್ಲಿ ಶಿಲಾಮೂರ್ತಿಗೆ ಅಭಿಷೇಕ ನೆರವೇರಿಸಿ, ಅಲ್ಲಿಂದ ಮತ್ತೆ ಮೆರವಣಿಗೆಯಲ್ಲಿ ಅಯೋಧ್ಯೆಗೆ ಕೊಂಡೊಯ್ದು, ಜನವರಿ 18ರಂದು ಶ್ರೀರಾಮ ಜನ್ಮಸ್ಥಳದ ಮೂಲ ಸ್ಥಾನದಲ್ಲಿ ನಿಲ್ಲಿಸಲಾಗುವುದು. 18ರಿಂದ 20ರವರೆಗೆ ಜಲಾಧಿವಾಸ, ಧಾನ್ಯಾ ಧಿವಾಸ, ಶಿಲಾಧಿವಾಸ ವಿಧಿ ವಿಧಾನ ನೆರವೇರಿಸಿ ಜನವರಿ 21ರಂದು ಪ್ರತಿಷ್ಠಾಪನೆಯ ಪೂರ್ವಸಿದ್ಧತೆ ನಡೆಸಲಾಗುವುದು,” ಎಂದರು.