ಹುಬ್ಬಳ್ಳಿ: ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾದ ಸನಾತನ ಧರ್ಮವನ್ನು ಕೈ ಬಿಡಬೇಕೆಂಬ ಬೇಡಿಕೆಯೊಂದಿಗೆ ನಾವು ಸನಾತನಿಗಳಲ್ಲ ಎಂಬ ಅಭಿಯಾನ ಆರಂಭಿಸಲಾಗಿದ್ದು, ರಾಜ್ಯದ ಎಲ್ಲ ಕಡೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ವಿಶ್ವ ಬಹುಜನ ಧ್ವಜ ಹಾಗೂ ಸಂವಿಧಾನ ರಕ್ಷಾ ಸೇನಾ ಟ್ರಸ್ಟ್ ಅಧ್ಯಕ್ಷ ಸದಾನಂದ ತೇರದಾಳ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಮುಂತಾದ ಆದರ್ಶಗಳಿಗೆ ಸನಾತನ ವಿರುದ್ಧವಾಗಿದೆ. ಸನಾತನ ಧರ್ಮವು ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ. ಅಸಮಾನತೆ ಪೋಷಿಸುವುದಲ್ಲದೆ ಅಸ್ಪಶ್ಯತೆಯಂತಹ ಸಾಮಾಜಿಕ ಅನಿಷ್ಟಗಳಿಗೆ ಜನ್ಮ ನೀಡುತ್ತದೆ ಎಂದರು.
ಸಂಘಟನೆಯ ಬಾಪು ಹೆದ್ದೂರಶೆಟ್ಟಿ ಮಾತನಾಡಿ, ಸಂವಿಧಾನದ ಮೂಲ ಆಶಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂಬರುವ ದಿನಗಳಲ್ಲಿ ಮೈಸೂರು ಹಾಗೂ ಮಂಗಳೂರು ಮತ್ತಿತರೆಡೆ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.
ಸಂವಿಧಾನ ಕೈಬಿಡಿ ಇಲ್ಲವೆ ಸನಾತನ ಕೈಬಿಡಿ ಎಂದು ಈಗಾಗಲೇ ಹುಬ್ಬಳ್ಳಿಯಲ್ಲಿ ನಾವು ಸನಾತನಿಗಳಲ್ಲ ಕಾರ್ಯಕ್ರಮ ನಡೆಸಲಾಗಿದೆ. ಅಲ್ಲದೆ ಬಲಿ ಚಕ್ರವರ್ತಿ ಸ್ಮರಣಾಂಜಲಿ ಸಮಾರಂಭ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನೆರವೇರಿಸಲಾಯಿತು.
ಕನ್ನಡದ ಉಳಿವಿಗಾಗಿ ಎಲ್ಲ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಕನ್ನಡ ಭಾಷೆಯಲ್ಲಿಯೇ ಪೂಜೆ ಸಲ್ಲಿಸಬೇಕು. ಅರ್ಚಕರ ವೃತ್ತಿ ಸರ್ವಜನಾಂಗದ ಹಕ್ಕಾಗಬೇಕು. ಇಡಬ್ಲುಎಸ್ಗೆ ನೀಡಿರುವ ಶೇ. 10 ಮೀಸಲಾತಿ ರದ್ದಾಗಬೇಕು. ಜಾತಿ ಜನಗಣತಿ ವರದಿ ಶ್ರೀ ಬಿಡುಗಡೆಯಾಗಬೇಕು ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.
ಶಮಿ ಅಹ್ಮದ ಮುಲ್ಲಾ, ಸಮಾಜವಾದಿ ಅಧ್ಯಯನ ಕೇಂದ್ರದ ಜಗನ್ ಸಿ.ಕೆ., ಶಂಕರ ಅಜಮನಿ, ಗಂಗಾಧರ ಪೆರೂರ ಗೋಷ್ಠಿಯಲ್ಲಿದ್ದರು.