ಒಂದೆಡೆ ಬರ, ಇನ್ನೊಂದೆಡೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು ಕಂಗಾಲಿದ್ದಾರೆ. ಈ ನಡುವೆ ಸರಕಾರದ ಯೋಜನೆಗಳು ಸುಸೂತ್ರವಾಗಿ ಅರ್ಹ ಫಲಾನುಭವಿ ರೈತರಿಗೆ ತಲುಪಿಸುವ ಕೆಲಸವಾಗುತ್ತಿಲ್ಲ. ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ನೋಂದಣಿಗೂ ನಿರ್ಲಕ್ಷ್ಯ ತೋರಲಾಗಿದೆ.
ಸರಕಾರದ ಯೋಜನೆಗಳನ್ನು ತಲುಪಿಸುವ ಹೊಣೆಗಾರಿಕೆ ನಿಭಾಯಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಶಾಸಕರಾದಿಯಾಗಿ ಜನಪ್ರತಿನಿಧಿಗಳ ಪಾತ್ರವಿದ್ದು, ಜಿಲ್ಲೆಯಲ್ಲಿ ಈ ವಿಚಾರದಲ್ಲಿಇಬ್ಬರೂ ನಿರ್ಲಕ್ಷ್ಯ ತೋರಿರುವುದಕ್ಕೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ನೋಂದಣಿ ಸಂಖ್ಯೆ ಶೇ. 14 ರಷ್ಟು ಮಾತ್ರ ಇರುವುದೇ ಸಾಕ್ಷಿ.
ಜಿಲ್ಲೆಯ 10 ತಾಲೂಕುಗಳಿಂದ 5,15,064 ರೈತರಿದ್ದಾರೆ. ಇವರಲ್ಲಿ ಫಸಲ್ ಬಿಮಾ ಯೋಜನೆಗೆ ನೋಂದಣಿಯಾದವರು 74,850 ಮಾತ್ರ. ಶೇ.86 ರಷ್ಟು ರೈತರು ಯೋಜನೆಯಿಂದ ದೂರವಿದ್ದಾರೆ.
ಕುಣಿಗಲ್ ಹಾಗೂ ತುಮಕೂರು ತಾಲೂಕಲ್ಲಿ ನೋಂದಣಿ ವಿಚಾರದಲ್ಲಿ ತೀರಾ ಕಳಪೆ ಪ್ರಗತಿಯಿದೆ. ಕುಣಿಗಲ್ ತಾಲೂಕಿನಲ್ಲಿ 58,778 ರೈತರಲ್ಲಿ ಯೋಜನೆಗೆ ನೋಂದಣಿಯಾದವರು 631 ಮಂದಿ ಮಾತ್ರ. ಹಾಗೆಯೇ ತುಮಕೂರಲ್ಲಿ 67,550 ರೈತರಲ್ಲಿ ನೋಂದಣಿಯಾದವರು 987 ರೈತರು. ಇನ್ನುಳಿದಂತೆ ಚಿಕ್ಕನಾಯಕನಹಳ್ಳಿಯಲ್ಲಿ 46,274ರಲ್ಲಿ8,959 ರೈತರು, ಗುಬ್ಬಿಯಲ್ಲಿ 61,220ರಲ್ಲಿ 2,340, ಕೊರಟಗೆರೆಯಲ್ಲಿ 33,334 ರಲ್ಲಿ6,572, ಮಧುಗಿರಿಯಲ್ಲಿ 50,210 ರಲ್ಲಿ8,987, ಪಾವಗಡದಲ್ಲಿ 38,045ರಲ್ಲಿ 6,744, ಶಿರಾದಲ್ಲಿ 56,154ರಲ್ಲಿ 13,153, ತಿಪಟೂರಲ್ಲಿ 51,754ರಲ್ಲಿ17,142 ಹಾಗೂ ತುರುವೇಕೆರೆಯಲ್ಲಿ 51,745ರಲ್ಲಿ 9,335 ರೈತರು ಮಾತ್ರ ನೋಂದಣಿಯಾಗಿದ್ದಾರೆ.