ಬೆಂಗಳೂರು:- ಕಾಂಗ್ರೆಸ್ನ ಬೆದರಿಕೆ ತಂತ್ರಗಳಿಗೆ ನಮ್ಮ ಕಾರ್ಯಕರ್ತರು ಹೆದರಲ್ಲ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಅಧಿಕಾರದ ಬಲದಿಂದ ಕಾಂಗ್ರೆಸ್ ಪಕ್ಷ ಏನೇ ತಂತ್ರ, ಕುತಂತ್ರ ಮಾಡಲಿ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ನ ಕೇಸ್, ಬೆದರಿಕೆ ತಂತ್ರಗಳಿಗೆ ಪಕ್ಷದ ಕಾರ್ಯಕರ್ತರು ಹೆದರುವುದಿಲ್ಲ. ಹೋರಾಟದಿಂದ ಹಿಂದೆ ಸರಿದ ಉದಾಹರಣೆಗಳಿಲ್ಲವೆಂದರು. ಕಾಂಗ್ರೆಸ್ ಅಬ್ಬರವನ್ನು ಮೀರಿ ನಮ್ಮ ಕಾರ್ಯಕರ್ತರು ಸಂಘಟನೆ ಮಾಡುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಉತ್ತರ ಕೊಡಲಿದ್ದೇವೆ ಎಂದು ಹೇಳಿದರು.
ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಿ ದೀಪಾವಳಿ ಶುಭಾಶಯ ಕೋರಿರುವೆ. ರಾಜ್ಯದ 58,282 ಬೂತ್ಗಳಲ್ಲಿ ಪಕ್ಷದ ಸಂಘಟನೆಗೆ ಬಲಪಡಿಸಲಾಗುವುದು. ಪ್ರತಿ ಬೂತ್ ಅಧ್ಯಕ್ಷ, ಪೇಜ್ ಪ್ರಮುಖ ಪಕ್ಷದ ಜೀವಾಳ ಎಂಬುದು ಹಿಂದಿನ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಹಾಲಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಪರಿಕಲ್ಪನೆ ಹಾಗೂ ಚಿಂತನೆಯಾಗಿದೆ ಎಂದರು.
ಪಕ್ಷದ ರಾಷ್ಟ್ರೀಯ ನಾಯಕರು ಬೂತ್ ಹಂತದಿಂದಲೇ ಬೆಳೆದು ಬಂದವರು. ರಾಷ್ಟ್ರೀಯ ಚಿಂತನೆ ಪ್ರಕಾರ 58 ಸಾವಿರ ಬೂತ್ಗಳಲ್ಲಿ ಸಂಘಟನೆಗೆ ಬಲ ತುಂಬಲು ಒತ್ತು ನೀಡುವೆ. ಇದರ ಭಾಗವಾಗಿ ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಿರುವೆ. ರಾಷ್ಟ್ರೀಯ ಅಧ್ಯಕ್ಷರಂತೆ ಬೂತ್ ಅಧ್ಯಕ್ಷರನ್ನು ಗೌರವದಿಂದ ಕಾಣುವುದು ಬಿಜೆಪಿಯ ವಿಶೇಷತೆ ಎಂದು ವಿಜಯೇಂದ್ರ ಹೇಳಿದರು.