ಭಾರತದಲ್ಲಿ ಎಲ್ಲಾ ಹಬ್ಬಗಳಿಗಿರುವಂತೆ ದೀಪಾವಳಿಗೂ ವಿಶೇಷ ಮನ್ನಣೆ. ದೇಶದಾದ್ಯಂತ ಜನ ತಮ್ಮ ಮನೆ, ಅಂಗಡಿ, ಕೆಲಸ ಮಾಡುವ ಸ್ಥಳ ಎಲ್ಲವನ್ನೂ ಅಲಂಕರಿಸಿ, ಮೇಣದ ಬತ್ತಿ, ಮಣ್ಣಿನ ಹಣತೆ, ಲೈಟಿಂಗ್ಸ್ ಹೀಗೆ ವಿಧವಿಧವಾದ ದೀಪ ಬೆಳಗಿಸಿ, ಪೂಜೆ ಮಾಡಿ ಸನ್ಮಂಗಳವನ್ನು ಬೇಡಿಕೊಳ್ಳುತ್ತಾರೆ.
ದೀಪಾವಳಿ ಹಬ್ಬ ಒಂದು ರೀತಿ ಕುಟುಂಬಗಳು ಮತ್ತು ಸಮುದಾಯಗಳ ಬಾಂಧವ್ಯದ ಆಚರಣೆಯಾಗಿದೆ. ನಮ್ಮ ಅನುಕೂಲಕತೆಗೆ, ಖುಷಿಗೆ ಮಾಡಿಕೊಂಡ ಹಬ್ಬ ಇದಲ್ಲ, ಬದಲಿಗೆ ಸಾವಿರಾರು ವರ್ಷಗಳ ಹಿಂದಿನಿಂದ ನಡೆದುಕೊಂಡು ಬಂದ ಹಬ್ಬ ಇದು. ಈ ಬೆಳಕಿನ ಹಬ್ಬ ಭಾರತದ ಇತಿಹಾಸದೊಂದಿಗೆ ಹಣೆದುಕೊಂಡಿದೆ.
ಐದು ದಿನಗಳ ಕಾಲ ಆಚರಿಸಲಾಗುವ ದೀಪಾವಳಿಯು ಭಾರತ ಉಪಖಂಡದಲ್ಲಿ ತನ್ನ ಬೇರುಗಳನ್ನು ಹೊಂದಿದೆ. 1ನೇ ಸಹಸ್ರಮಾನದ CE ಯ ದ್ವಿತೀಯಾರ್ಧದಲ್ಲಿ ಬರೆಯಲಾದ ಸ್ಕಂದ ಪುರಾಣ ಮತ್ತು ಪದ್ಮ ಪುರಾಣದಂತಹ ಆರಂಭಿಕ ಸಂಸ್ಕೃತ ಪಠ್ಯಗಳಲ್ಲಿ ದೀಪಾವಳಿ ಹಬ್ಬ ಉಲ್ಲೇಖವಾಗಿದೆ.
ಸ್ಕಂದ ಕಿಶೋರ್ ಪುರಾಣದಲ್ಲಿ, ದೀಪಗಳು ಸೂರ್ಯನ ಭಾಗಗಳನ್ನು ಸಂಕೇತಿಸುತ್ತದೆ ಎಂದು ಹೇಳುವ ಮೂಲಕ ಹಬ್ಬದ ಮಹತ್ವ ಹೇಳಲಾಗಿದೆ.
7ನೇ ಶತಮಾನದಲ್ಲಿ ಬರೆದ ‘ನಾಗಾನಂದ’ ನಾಟಕದಲ್ಲಿ ಚಕ್ರವರ್ತಿ ಹರ್ಷ ಅವರು ದೀಪಗಳು ಮತ್ತು ಉಡುಗೊರೆಗಳನ್ನು ಹೊಂದಿರುವ ಹಬ್ಬ ಎಂದು ದೀಪಾವಳಿಯನ್ನು ಉಲ್ಲೇಖಿಸಿದ್ದಾರೆ
ಭಾರತಕ್ಕೆ ಬರುವ ವಿದೇಶಿ ಪ್ರಯಾಣಿಕರು ಕೂಡ ತಮ್ಮ ಬರಹಗಳಲ್ಲಿ ದೀಪಾವಳಿಯನ್ನು ಉಲ್ಲೇಖಿಸಿದ್ದಾರೆ. ಪರ್ಷಿಯನ್ ಪ್ರವಾಸಿ ಮತ್ತು ಇತಿಹಾಸಕಾರ ಅಲ್ ಬಿರುನಿ ಭಾರತದ ಕುರಿತಾದ ತನ್ನ ಆತ್ಮಚರಿತ್ರೆಯಲ್ಲಿ ದೀಪಾವಳಿಯ ಬಗ್ಗೆ ಬರೆದಿದ್ದಾರೆ.
15 ನೇ ಶತಮಾನದ ಆರಂಭದಲ್ಲಿ ವೆನಿಸ್ನ ವ್ಯಾಪಾರಿ ಮತ್ತು ಪ್ರಯಾಣಿಕ ನಿಕೊಲೊ ಡೆ ಕಾಂಟಿ ದೀಪಾವಳಿಯ ವೈಭವದ ಬಗ್ಗೆ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.
ಕಲ್ಲು ಮತ್ತು ತಾಮ್ರದಲ್ಲಿ ಬರೆದ ಸಂಸ್ಕೃತದ ಶಾಸನಗಳು ಭಾರತದ ಹಲವಾರು ಸ್ಥಳಗಳಲ್ಲಿ ಪತ್ತೆಯಾಗಿವೆ. ಇಲ್ಲೂ ಸಹ ಈ ಹಬ್ಬದ ಉಲ್ಲೇಖವಿದೆ.
ಉದಾಹರಣೆಗೆ, 10ನೇ ಶತಮಾನದಲ್ಲಿ ರಾಷ್ಟ್ರಕೂಟ ದೊರೆ ಕೃಷ್ಣ III ರ ಆಳ್ವಿಕೆಗೆ ಹಿಂದಿನ ತಾಮ್ರದ ತಟ್ಟೆಯ ಮೇಲಿನ ಶಾಸನದಲ್ಲಿ ದೀಪಾವಳಿಯ ಬಗ್ಗೆ ಹೇಳಲಾಗಿದೆ.
12 ನೇ ಶತಮಾನದಷ್ಟು ಹಿಂದಿನದು ಮತ್ತು ಕರ್ನಾಟಕದ ಧಾರವಾಡದಲ್ಲಿ ಕಂಡುಬಂದಿರುವ ಮಿಶ್ರ ಸಂಸ್ಕೃತ-ಕನ್ನಡ ಸಿಂದಾ ಶಾಸನವು ಬೆಳಕಿನ ಹಬ್ಬವನ್ನು ಪವಿತ್ರವೆಂದು ವಿವರಿಸುತ್ತದೆ.
ಕೆಲವರು ರಾಮ, ಸೀತೆ ಮತ್ತು ಲಕ್ಷ್ಮಣರು 14 ವರ್ಷಗಳ ಕಾಲ ವನವಾಸದಲ್ಲಿದ್ದು ರಾವಣನನ್ನು ಸೋಲಿಸಿದ ನಂತರ ಅಯೋಧ್ಯೆಯನ್ನು ತಲುಪಿದರು ಎಂಬ ಅರ್ಥದಲ್ಲಿ ಹಬ್ಬ ಆಚರಿಸಿದರೆ, ಇನ್ನು ಕೆಲವೆಡೆ 16,000 ಹುಡುಗಿಯರನ್ನು ಜೈಲಿನಲ್ಲಿಟ್ಟ ನರಕಾಸುರ ಎಂಬ ರಾಕ್ಷಸನನ್ನು ಶ್ರೀಕೃಷ್ಣ ಸೋಲಿಸಿ ಕೊಂದ ನಂತರ ದುಷ್ಟರ ಮೇಲೆ ಒಳಿತಿನ ವಿಜಯದ ಸಂಕೇತವಾಗಿ ದೀಪಾವಳಿಯನ್ನು ಆಚರಿಸುತ್ತಾರೆ.
ಅನೇಕ ಹಿಂದೂಗಳು ಈ ಹಬ್ಬವನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಗೆ ಮೀಸಲಿಟ್ಟು ಪೂಜೆ ಮಾಡುತ್ತಾರೆ. ಪೂರ್ವ ಭಾರತದಲ್ಲಿ ವಿಶೇಷವಾಗಿ ಬಂಗಾಳದಲ್ಲಿ, ಕೆಟ್ಟದ್ದು ಅಳಿದು ಒಳ್ಳೆಯದು ಎಂಬ ಅರ್ಥದಲ್ಲಿ ಕಾಳಿ ದೇವಿಯನ್ನು ಪೂಜೆ ಮಾಡುತ್ತಾರೆ