ಇದೀಗ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಬಹಳ ಉಪಯುಕ್ತವಾದ ಆಯ್ಕೆಯೊಂದನ್ನು ವಾಟ್ಸ್ಆ್ಯಪ್ ನೀಡಿದೆ. WABetaInfo ಮಾಡಿರುವ ವರದಿಯ ಪ್ರಕಾರ, ಬಳಕೆದಾರರು ಇದೀಗ ಫೋನ್ ನಂಬರ್ ಪ್ರೈವಸಿ ಆಯ್ಕೆಯನ್ನು ಪಡೆದಿದ್ದಾರೆ ಎಂದು ಹೇಳಿದೆ. ವಾಟ್ಸ್ಆ್ಯಪ್ನ (WhatsApp) ನೂತನ ಬೇಟಾ ವರ್ಷನ್ ಅಪ್ಡೇಟ್ ಮಾಡಿದರೆ ಈ ಆಯ್ಕೆ ಸಿಗಲಿದೆ.
ಫೋನ್ ನಂಬರ್ ಪ್ರೈವಸಿ ಫೀಚರ್ ಕಮ್ಯೂನಿಟಿ ಅನೌನ್ಸ್ಮೆಂಟ್ ಗ್ರೂಪ್ನಲ್ಲಿ ಕಾಣಸಿಗಲಿದೆ. ಹೆಸರೇ ಸೂಚಿಸುವಂತೆ, ಬಳಕೆದಾರರು ತಮ್ಮ ಮೊಬೈಲ್ ನಂಬರ್ ಅನ್ನು ಕಮ್ಯೂನಿಟಿ ಅನೌನ್ಸ್ಮೆಂಟ್ ಗ್ರೂಪ್ನಲ್ಲಿ ಮರೆಮಾಡುವ ಮೂಲಕ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಈ ವೈಶಿಷ್ಟ್ಯವು ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯದೊಂದಿಗೆ, ಅವರ ಫೋನ್ ಸಂಖ್ಯೆಯು ಕಮ್ಯೂನಿಟಿ ಅಡ್ಮಿನ್ ಮತ್ತು ಅವರ ನಂಬರ್ ಅನ್ನು ಸೇವ್ ಮಾಡಿಟ್ಟುಕೊಂಡವರಿಗೆ ಮಾತ್ರ ಗೋಚರಿಸುತ್ತದೆ. ಗ್ರೂಪ್ನಲ್ಲಿ ಇರುವ ಇತರೆ ಸದಸ್ಯರಿಂದ ತಮ್ಮ ಮೊಬೈಲ್ ಸಂಖ್ಯೆಗಳನ್ನು ಮರೆಮಾಡಲು ಇದು ಬಳಕೆದಾರರಿಗೆ ಸಹಾಯ ಮಾಡುತ್ತದೆ.