ಮುಂಬೈನ ಜಿಎಸ್‌ಬಿ ಸೇವಾ ಮಂಡಲ (GSB Seva Mandal) ದೇಶದಲ್ಲೇ ಅಂತ್ಯಂತ ಶ್ರೀಮಂತ ಗಣೇಶ ಮೂರ್ತಿಯನ್ನ ಕೂರಿಸಿ, ಗಣೇಶೋತ್ಸವವನ್ನು ಆಚರಿಸುತ್ತಿದೆ. ವಿಶೇಷವೆಂದರೆ ಈ ಗಣೇಶನ ಮೂರ್ತಿಯ ಅಲಂಕಾರಕ್ಕೇ 69 ಕೆಜಿ ಚಿನ್ನ ಹಾಗೂ 336 ಕೆಜಿ ಬೆಳ್ಳಿಯನ್ನು ಬಳಕೆ ಮಾಡಲಾಗಿದೆ.
ಹೌದು.. ಮುಂಬೈನ ಅತ್ಯಂತ ದೊಡ್ಡ ಗಣೇಶ ಎನ್ನಲಾದ ಕಿಂಗ್ಸ್ ಸರ್ಕಲ್ನ ಈ ಗಣಪತಿಗೆ ಹೀಗೆ ಚಿನ್ನ-ಬೆಳ್ಳಿಯಲ್ಲಿ ಭರ್ಜರಿ ಅಲಂಕಾರ ಮಾಡಲಾಗಿದೆ. ಜಿಎಸ್‌ಬಿ ಸೇವಾ ಮಂಡಲದವರು ಅದ್ಧೂರಿಯಾಗಿ ವರ್ಷಪೂರ್ತಿ ಆಚರಿಸುವ ಈ ಗಣೇಶ ಉತ್ಸವ ಪ್ರಸಿದ್ಧಿ ಪಡೆದಿದ್ದು, ಪ್ರತಿ ವರ್ಷವೂ ದೇಶದ ಗಮನ ಸೆಳೆಯುತ್ತದೆ. ಈ ಬಾರಿ ಸೆ.19ರಿಂದ 23ರ ವರೆಗೂ ಇಲ್ಲಿ ಗಣೇಶ ಚತುರ್ಥಿ ಉತ್ಸವ ಆಚರಣೆ ಆಗಲಿದೆ.

ಈ ಗಣೇಶನಿಗೆ ವೈಭವೋಪೇತ ಅಲಂಕಾರ ಮಾಡಲಾಗುತ್ತಿದ್ದು, ಈ ಸಲ ಅಲಂಕಾರಕ್ಕೆಂದೇ 69 ಕೆಜಿ ಚಿನ್ನ ಹಾಗೂ 336 ಕೆಜಿ ಬೆಳ್ಳಿ ಬಳಸಲಾಗಿದೆ. ದುಬಾರಿ ಅಲಂಕಾರ ಮತ್ತಿತರ ಕಾರಣಗಳಿಂದಾಗಿ ಈ ಗಣೇಶನಿಗೆ ಪ್ರತಿವರ್ಷ ವಿಮೆ ಕೂಡ ಮಾಡಿಸಲಾಗುತ್ತಿದ್ದು, ಈ ಬಾರಿ 360 ಕೋಟಿ ರೂ.ಗೆ ವಿಮೆ ಮಾಡಿಸಲಾಗಿದೆ. ಕಳೆದ ವರ್ಷ ಜಿಎಸ್‌ಬಿ ಮಂಡಲವು 316.40 ಕೋಟಿ ರೂ. ವಿಮೆ ಮಾಡಿಸಿತ್ತು. ಆದರೆ ಈ ಬಾರಿ ವಿಮೆ ಮೊತ್ತವು 44 ಕೋಟಿ ರೂ. ಹೆಚ್ಚಾಗಿದೆ. ಅದ್ರೆ ಎಷ್ಟು ಪ್ರೀಮಿಯಂ ಪಾವತಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕೃತಗೊಳಿಸಿಲ್ಲ.
