ಬೆಂಗಳೂರು: ರಾಜ್ಯದ ರೈತ ಸಮೂಹಕ್ಕೆ ಖುಷಿ ಸುದ್ದಿ ಸಿಕ್ಕಿದ್ದು, ಪ್ರಧಾನ ಮಂತ್ರಿ ಯೋಜನೆ ಅಡಿಯಲ್ಲಿ ರಾಜ್ಯಕ್ಕೆ 642.26 ಕೋಟಿ ಮಂಜೂರಾಗಿದೆ. ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಸಚಿವ ಬಿಸಿ ಪಾಟೀಲ್ ಮಾಹಿತಿ ನೀಡಿದ್ದಾರೆ. ಸಮತಟ್ಟ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ 60:40 ಅನುಪಾತದಲ್ಲಿ ವೆಚ್ಚ ಭರಿಸಲಿದ್ದು, ಸಮತಟ್ಟಾದ ಪ್ರದೇಶದ ಪ್ರತಿ ಹೆಕ್ಟೇರ್ ಜಲಾನಯನಗಳ ಉಪಚಾರಕ್ಕೆ 22 ಸಾವಿರ ರೂ. ಗುಡ್ಡಗಾಡು ಪ್ರದೇಶದ ಜಲಾನಯನ ಉಪಚಾರಕ್ಕೆ 28 ಸಾವಿರವರೆಗೆ ಅನುದಾನ ಲಭ್ಯವಾಗಲಿದೆ ಎಂದು ಹೇಳಿದರು.
ಇನ್ನೂ ಪರ್ಯಾಯ ಬೆಳೆ ವ್ಯವಸ್ಥೆ ಪ್ರೋತ್ಸಾಹಿಸುವುದು, ಹವಾಮಾನ ವೈಪರೀತ್ಯ ಮತ್ತು ಬರಗಾಲದ ಅಪಾಯ ಎದುರಿಸುವುದು, ಆಸ್ತಿ ರಹಿತರಿಗೆ ಸ್ವ ಸಹಾಯ ಗುಂಪುಗಳನ್ನು ರಚಿಸಿ ಉತ್ತೇಜಿಸುವುದು, ಅಂಗವಿಕಲರು ಮತ್ತು ಮಹಿಳೆಯರಿಗೆ ಅಭಿವೃದ್ಧಿಪಡಿಸಿದ ಭೂಮಿ, ನೀರು ಮತ್ತು ಜೀವರಾಶಿಗಳ ಸಂಪನ್ಮೂಲಗಳ ಹಂಚಿಕೆಯಲ್ಲಿ ಸಮಾನ ಪ್ರವೇಶ ಮತ್ತು ಅವಕಾಶ, ರೈತ ಉತ್ಪಾದಕ ಸಂಸ್ಥೆ, ಬಳಕೆದಾರರ ಗುಂಪು ಸೇರಿದಂತೆ ವಿವಿಧ ಸಮುದಾಯ ಸಂಸ್ಥೆಗಳಲ್ಲಿ ಈ ವರ್ಗಗಳ ಜನರಿಗೆ ಸದಸ್ಯತ್ವ ನೀಡಲು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶಗಳಾಗಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
