ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ನಾಗಶೇಖರ್ ತಮಗೆ ವಂಚನೆಯಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇ ರಿದ್ದಾರೆ. 50 ಲಕ್ಷ ರೂಪಾಯಿ ವಂಚಿಸಲಾಗಿದೆ ಎಂದು ಬೆಂಗಳೂರಿನ ಆರ್.ಆರ್ ನಗರ ಪೊಲೀಸ್ ಠಾಣೆಗೆ ನಿರ್ದೇಶಕ ದೂರು ನೀಡಿದ್ದಾರೆ. ಆರ್.ಆರ್ ನಗರದ ಮೀನಾ ಹಾಗೂ ರಾಜ್ಕುಮಾರ್ ವಿರುದ್ಧ ದೂರು ನೀಡಲಾಗಿದೆ. 2 ಕೋಟಿ 70 ಲಕ್ಷ ರೂ.ಗೆ ಮನೆ ಖರೀದಿ ಬಗ್ಗೆ ಮಾತನಾಡಿ, ನಾಗಶೇಖರ್ ₹ 50 ಲಕ್ಷ ಹಣ ನೀಡಿದ್ದರು. ಇದೀಗ ಮನೆಯನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಇತ್ತ ಹಣವೂ ಇಲ್ಲ, ಮನೆಯೂ ಇಲ್ಲ; ತಮಗೆ ವಂಚನೆಯಾಗಿದೆ ಎಂದು ನಾಗಶೇಖರ್ ದೂರಿನಲ್ಲಿ ತಿಳಿಸಿದ್ದಾರೆ.
ಆರ್.ಆರ್.ನಗರದ ಜಯಣ್ಣ ಲೇಔಟ್‌ನಲ್ಲಿ ಮನೆ ಖರೀದಿ ಮಾಡಲು ಮುಂದಾಗಿದ್ದ ನಿರ್ದೇಶಕ ನಾಗಶೇಖರ್, ಅದಕ್ಕಾಗಿ 2 ಕೋಟಿ 70 ಲಕ್ಷ ರೂ.ಗೆ ಮೀನಾ ಎಂಬುವವರ ಬಳಿ ಮಾತುಕತೆ ನಡೆಸಿದ್ದರು. 2020ರ ಆಗಸ್ಟ್‌ನಲ್ಲಿ ಸೇಲ್ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು. ಅಗ್ರಿಮೆಂಟ್ ಬಳಿಕ ಹಂತ ಹಂತವಾಗಿ ಮೀನಾ ಅವರ ಖಾತೆಗೆ ಹಣ ವರ್ಗಾವಣೆ ಮಾಡಿದ್ದ ನಾಗಶೇಖರ್, ಒಟ್ಟು ₹ 50 ಲಕ್ಷ ನೀಡಿದ್ದರು.

ಆದರೆ ಈಗ ಮತ್ತೊಬ್ಬರಿಗೆ ಮನೆ ಮಾರಾಟ ಮಾಡಲಾಗಿದೆ ಎಂದು ನಿರ್ದೇಶಕ ನಾಗಶೇಖರ್ ದೂರು ನೀಡಿದ್ದಾರೆ. ಅಲ್ಲದೇ ಸೇಲ್ ಅಗ್ರಿಮೆಂಟ್ ಬಳಿಕ ಪಡೆದಿದ್ದ 50 ಲಕ್ಷ ರೂ ಹಣವನ್ನು ವಾಪಸ್ ನೀಡಿಲ್ಲ ಎಂದು ನಿರ್ದೇಶಕ ಆರೋಪಿಸಿದ್ದಾರೆ. ದುಡ್ಡು, ಮನೆ ಎರಡೂ ಇಲ್ಲದೇ ಕಂಗಾಲಾಗಿರುವ ನಿರ್ದೇಶಕ, ಮೀನಾ ಹಾಗೂ ರಾಜ್ಕುಮಾರ್ ವಿರುದ್ಧ ಆರ್.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸೆಕ್ಷನ್ 420ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿರ್ದೇಶಕ ನಾಗಶೇಖರ್ ಸ್ಯಾಂಡಲ್ವುಡ್ನಲ್ಲಿ ತಮ್ಮ ಚಿತ್ರಗಳಿಂದ ಗುರುತಿಸಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಅರಮನೆ, ಚೇತನ್ ನಟನೆಯ ಮೈನಾ, ಶ್ರೀನಗರ ಕಿಟ್ಟಿ, ರಮ್ಯಾ ಅಭಿನಯದ ಸಂಜು ವೆಡ್ಸ್ ಗೀತಾ, ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ, ಅಭಿಷೇಕ್ ಅಂಬರೀಷ್ ನಟನೆಯ ಅಮರ್ ಸೇರಿದಂತೆ ಹಲವು ಖ್ಯಾತ ಸಿನಿಮಾಗಳನ್ನು ನಿರ್ದೇಶಿಸಿರುವ ಕೀರ್ತಿ ನಾಗಶೇಖರ್ ಗಿದೆ. ಇದಲ್ಲದೇ ‘ವೀರಕನ್ನಡಿಗ’ ಹಾಗೂ ‘ರಂಗ SSLC’ ಸಿನಿಮಾದಲ್ಲಿ ನಾಗಶೇಖರ್ ನಟಿಸಿದ್ದಾರೆ.