ಟ್ರಿಪೋಲಿ: ಆಗ್ನೇಯ ಲಿಬಿಯಾದ ಮರುಭೂಮಿಯಲ್ಲಿ 2 ಸಾಮೂಹಿಕ ಸಮಾಧಿಗಳಿಂದ ಸುಮಾರು 50 ವಲಸಿಗರ ಮೃತದೇಹಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.
ಆಗ್ನೇಯ ನಗರವಾದ ಕುಫ್ರಾದಲ್ಲಿನ ಜಮೀನಿನಲ್ಲಿ ಶುಕ್ರವಾರ ಪತ್ತೆಹಚ್ಚಲಾದ ಸಾಮೂಹಿಕ ಸಮಾಧಿಯಲ್ಲಿ 19 ಮೃತದೇಹಗಳು ಪತ್ತೆಯಾಗಿವೆ. ಅವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಮರಳನ್ನು ಅಗೆದು ಕಂಬಳಿಗಳಲ್ಲಿ ಸುತ್ತಿಡಲಾಗಿದ್ದ ಮೃತದೇಹಗಳನ್ನು ಹೊರೆತೆಯುತ್ತಿರುವ ಚಿತ್ರವನ್ನು ಅಧಿಕಾರಿಗಳು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೃತರಲ್ಲಿ ಕೆಲವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ಸ್ಪಷ್ಟವಾಗಿದೆ ಎಂದು ಪೂರ್ವ ಮತ್ತು ದಕ್ಷಿಣ ಲಿಬಿಯಾದಲ್ಲಿ ವಲಸಿಗರಿಗೆ ನೆರವಾಗುವ `ಅಲ್-ಅಬ್ರೀನ್ ಚಾರಿಟಿ’ ಹೇಳಿದೆ. ಕುಫ್ರಾ ನಗರದಲ್ಲಿ ಕಾರ್ಯಾಚರಿಸುತ್ತಿದ್ದ ಮಾನವ ಕಳ್ಳಸಾಗಣೆ ಕೇಂದ್ರದ ಮೇಲೆ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದಾಗ ಮತ್ತೊಂದು ಸಾಮೂಹಿಕ ಗೋರಿಯಲ್ಲಿ ಕನಿಷ್ಟ 30 ವಲಸಿಗರ ಮೃತದೇಹ ಪತ್ತೆಯಾಗಿದೆ. ಅಧಿಕಾರಿಗಳು ಈ ಪ್ರದೇಶದಲ್ಲಿ ಮತ್ತಷ್ಟು ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ಮಾಧ್ಯಮಗಳು ವರದಿಯಲ್ಲಿ ಉಲ್ಲೇಖಿಸಿವೆ.