ಬೆಂಗಳೂರು:– ಬೀದಿನಾಯಿ ಕಚ್ಚಿ ಸತ್ತರೆ 5 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ 5 ಸಾವಿರ ರೂ. ನೆರವು ನೀಡಲು ನಿರ್ಧರಿಸಲಾಗಿದೆ ಎಂದು ಹೈಕೋರ್ಟ್ಗೆ ಸರ್ಕಾರದಿಂದ ಮಾಹಿತಿ ನೀಡಲಾಗಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾ.ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ರಾಜ್ಯ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ 2023ರ ಅ.6ರಂದು ಸಭೆ ನಡೆಸಲಾಗಿದೆ. ನಾಯಿ ದಾಳಿಯಿಂದ ಗಾಯಗೊಂಡವರಿಗೆ ಐದು ಸಾವಿರ ರೂ. ಹಾಗೂ ಜೀವ ಕಳೆದುಕೊಂಡವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವ ಕುರಿತು ರ್ಚಚಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮುಂದಿನ 4 ವಾರಗಳಲ್ಲಿ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿತು.
ಪ್ರಾಣಿ ಪೋಷಣೆ, ಲಸಿಕಾ ವಿಧಾನ ಮತ್ತು ಇನ್ನಿತರ ಶ್ವಾನ ಸಂಬಂಧಿ ವಿಷಯಗಳನ್ನು ಪ್ರತಿಯೊಬ್ಬರೂ ತಿಳಿದಿರಬೇಕಿದೆ. ಸರ್ಕಾರವು ಶ್ವಾನಗಳ ಕುರಿತು ಜಾಹೀರಾತು, ಕಿರುಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಪ್ರಸಾರ ಮಾಡಬೇಕು. ಜತೆಗೆ ವಾರ್ತಾ ಮತ್ತು ಪ್ರಚಾರ ಇಲಾಖೆ ಮೂಲಕ ವ್ಯಾಪಕ ಪ್ರಚಾರ ನೀಡಿ ಜಾಗೃತಿ ಮೂಡಿಸಬೇಕು ಎಂದು ನ್ಯಾಯಪೀಠ ಸೂಚಿಸಿತು.