ತುಮಕೂರು;- ಇನ್ನೊಂದು ವಾರದಲ್ಲಿ 3500 ಪೊಲೀಸ್ ಕಾನ್‌ಸ್ಟೇಬಲ್ ನೇಮಕ ಮಾಡಲಾಗುತ್ತದೆ ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ತುಮಕೂರಿನಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆಗೆ ನೇಮಕ ಪ್ರಕ್ರಿಯೆ ಆರಂಭವಾಗಿದ್ದು ಇನ್ನು ಒಂದು ವಾರದೊಳಗೆ 3500 ಜನರಿಗೆ ಆದೇಶ ಹೋಗುತ್ತದೆ.

ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಹಿನ್ನೆಲೆಯಲ್ಲಿ ಪ್ರಮುಖ ಗಮನ ಕೊಟ್ಟಿದ್ದೇವೆ. ಯಾರೋ ಒಂದು ಪೋಸ್ಟ್ ಮಾಡಿದರೆ ಆ ಪೋಸ್ಟ್ ಒಂದು ಸಮುದಾಯವನ್ನು ಕೆರಳಿಸುವ ರೀತಿ ಇದ್ದರೆ ಅಂತಹ ಪೋಸ್ಟ್‌ಗಳನ್ನು ನಿಯಂತ್ರಣ ಮಾಡುವುದಕ್ಕೆ ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟಿದ್ದೇನೆ ಎಂದರು.
ತುಮಕೂರಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಸ್ಮಾರ್ಟ್ ಸಿಟಿ, ಟೂಡಾ ಮತ್ತು ಪಿಡಬ್ಲ್ಯೂಡಿ ಇಲಾಖೆಗಳಿಂದ ಕೈಗೊಳ್ಳಲಾದ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಜನರಿಗೆ ಅನುಕೂಲವಾಗುವಂತೆ ವೈಫೈ ಸಂಪರ್ಕ ಸೇರಿದಂತೆ ವಿನೂತನ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಬಸ್ ನಿಲ್ದಾಣದಲ್ಲಿ ಅಳವಡಿಸುವಂತೆ ಸೂಚಿಸಿದರು.
ಸರ್ಕಾರದ ಯಾವುದೇ ಯೋಜನೆಗಳ ಅನುಷ್ಠಾನವನ್ನು ಮುಂದಿನ 50 ವರ್ಷಗಳ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಬೇಕು ಮತ್ತು ಯೋಜನೆಗಳು ಜನರಿಗೆ ಸಂಪೂರ್ಣವಾಗಿ ಉಪಯೋಗವಾಗಬೇಕು. ಸ್ಮಾರ್ಟ್ ಸಿಟಿಯಿಂದ ನಗರದಲ್ಲಿ ನಿರ್ಮಾಣವಾಗಿರುವ ‘ಸೆಂಟ್ರಲೈಸ್ಡ್ ಸೆಂಟರ್’ಅನ್ನು ಕಾಮಗಾರಿ ಪೂರ್ಣಗೊಂಡ ನಂತರ ಪೊಲೀಸ್ ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಿದರು.
