ಧಾರವಾಡ : ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಸಿಗದೇ ಹೋದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಯಲಿವೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಕಿಡಿಕಾರಿದ್ದಾರೆ. ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಕಳೆದ ಮೂರು ವರ್ಷಗಳಿಂದ ನಾವು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಕಳೆದ ಸರ್ಕಾರ ಕೊನೆ ಘಳಿಗೆಯಲ್ಲಿ ನಮಗೆ 2ಡಿ ಮೀಸಲಾತಿ ನೀಡಿತು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದು ಆದೇಶ ಪತ್ರ ನಮ್ಮ ಕೈ ಸೇರಲೇ ಇಲ್ಲ. ಈಗ ಹೊಸ ಸರ್ಕಾರ ಬಂದಿದೆ. ನಮ್ಮ ಸಮಾಜದ ಶಾಸಕರು, ಸಚಿವರು ಮೀಸಲಾತಿಗಾಗಿ ಮತ್ತೆ ಸಿಎಂ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ.
ಆದರೆ, ಸಿದ್ದರಾಮಯ್ಯನವರು ಬಜೆಟ್ ಅಧಿವೇಶನ ಮುಗಿದ ಮೇಲೆ ನಮ್ಮ ಸಮಾಜದ ಮುಖಂಡರ ಸಭೆ ಕರೆಯುವುದಾಗಿ ಹೇಳಿ ಇಂದಿಗೂ ಸಭೆ ಕರೆದಿಲ್ಲ. ಇದರಿಂದಾಗಿ ಮತ್ತೆ ನಾವು ಹೋರಾಟ ಆರಂಭಿಸಿದ್ದೇವೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಸರ್ಕಾರದ ಗಮನಸೆಳೆದಿದ್ದೇವೆ…ಬೆಳಗಾವಿಯಲ್ಲೇ ನಮ್ಮ ಸಮಾಜದ ಮುಖಂಡರ ಸಭೆ ಕರೆದು ಮೀಸಲಾತಿ ವಿಚಾರವಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಿಎಂ ಅವರ ಮೇಲೆ ಒತ್ತಡ ಹಾಕುತ್ತಿದ್ದೇವೆ.
ಆದರೆ, ಸಿಎಂ ಅವರು ಮತ್ತೆ ಈಗ ಅಧಿವೇಶನ ಮುಗಿದ ಮೇಲೆ ಮಾತನಾಡೋಣ ಎನ್ನುತ್ತಿದ್ದಾರೆ. ಇಲ್ಲೇ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಿ ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಅಧಿವೇಶನ ಮುಗಿದ ಮೇಲೆ ಬೆಂಗಳೂರಿನಲ್ಲೇ ಸಭೆ ಕರೆಯುತ್ತೇನೆ ಎಂದಿದ್ದಾರೆ. ಸಿಎಂ ಅವರ ಈ ನಕಾರಾತ್ಮಕ ಸ್ಪಂದನೆ ವಿರುದ್ಧ ನಾವು ಇದೇ ಡಿ.13 ರಂದು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಸಿಎಂ ಅವರ ನಿರ್ಲಕ್ಷ್ಯ ಧೋರಣೆಯಿಂದಾಗಿ ಈ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.