ನವದೆಹಲಿ: ಭಾರತೀಯ ಮೂಲದ ತಮಿಳುನಾಡು ನಿವಾಸಿ ಮಹಿಳೆ ಕಲ್ಪನಾ ಬಾಲನ್ ಅವರು ವಿಶಿಷ್ಟ ಕಾರಣದಿಂದಾಗಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. 26 ವರ್ಷ ವಯಸ್ಸಿನ ಕಲ್ಪನಾ ಅವರ ಬಾಯಿಯಲ್ಲಿ ಬರೋಬ್ಬರಿ 38 ಹಲ್ಲುಗಳಿವೆ. ಸಾಮಾನ್ಯವಾಗಿ ಮಾನವರ ಬಾಯಿಯಲ್ಲಿ 32 ಹಲ್ಲುಗಳು ಇರುತ್ತವೆ. ಆದರೆ, ಕಲ್ಪನಾ ಬಾಲನ್ ಅವರ ಬಾಯಿಯಲ್ಲಿ ಒಟ್ಟು 38 ಹಲ್ಲುಗಳು ಇದ್ದು, 6 ಹಲ್ಲುಗಳು ಹೆಚ್ಚುವರಿಯಾಗಿ ಇರುವ ಕಾರಣಕ್ಕೆ ಗಿನ್ನೆಸ್ ದಾಖಲೆಗೆ ಪಾತ್ರರಾಗಿದ್ದಾರೆ.
ಈ ಕುರಿತಾಗಿ ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಕುರಿತಾಗಿ ಮಾಹಿತಿ ಪ್ರಕಟಿಸಿದೆ. ಕಲ್ಪನಾ ಬಾಲನ್ ಅವರ ಕೆಳ ದವಡೆಯಲ್ಲಿ ನಾಲ್ಕು ಹೆಚ್ಚುವರಿ ಹಲ್ಲುಗಳಿವೆ. ಇನ್ನು ಮೇಲು ದವಡೆಯಲ್ಲಿ 2 ಹೆಚ್ಚುವರಿ ಹಲ್ಲುಗಳು ಇವೆ. ಈ ಕುರಿತಾಗಿ ಸಚಿತ್ರ ಸಹಿತ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಮಾಹಿತಿ ನೀಡಲಾಗಿದೆ. ಕಲ್ಪನಾ ಬಾಲನ್ ಅವರು ಹದಿ ಹರೆಯಲ್ಲಿದ್ದಾಗ ಅವರ ಬಾಯಿಯಲ್ಲಿ ಹಾಲು ಹಲ್ಲುಗಳು ಉದುರಿದ ಬಳಿಕ ಬೆಳೆದ ಹೊಸ ಹಲ್ಲುಗಳ ಪೈಕಿ 6 ಹಲ್ಲುಗಳು ಹೆಚ್ಚುವರಿಯಾಗಿ ಬೆಳೆದಿವೆ.
Kalpana Balan from India has six more teeth than the average human.
Read more by clicking the picture 👇
— Guinness World Records (@GWR) November 20, 2023
ಒಂದೊಂದಾಗಿ ಹೆಚ್ಚುವರಿ ಹಲ್ಲುಗಳು ಬೆಳೆದರೂ ಕೂಡಾ ಕಲ್ಪನಾ ಅವರಿಗೆ ಯಾವುದೇ ರೀತಿಯಲ್ಲೂ ನೋವಿನ ಅನುಭವ ಆಗಿಲ್ಲ. ಆದರೆ ಅವರು ಊಟ ಮಾಡುವಾಗ ಸಾಕಷ್ಟು ಕಷ್ಟ ಆಗುತ್ತಿದೆ. ಆಹಾರ ಪದಾರ್ಥ ಹಲ್ಲುಗಳ ನಡುವೆ ಸಿಲುಕುವ ಕಾರಣಕ್ಕೆ ಅವರಿಗೆ ತೊಂದರೆ ಆಗುತ್ತಿದೆ. ಕಲ್ಪನಾ ಅವರ ಬಾಯಿಯಲ್ಲಿ 6 ಹೆಚ್ಚುವರಿ ಹಲ್ಲುಗಳು ಬೆಳೆದಿರೋದನ್ನು ಮೊದಲು ಗಮನಿಸಿದ ಅವರ ಪೋಷಕರು ಅಚ್ಚರಿಗೊಂಡರು. ಹೆಚ್ಚುವರಿಯಾಗಿ ಬೆಳೆದ ಹಲ್ಲನ್ನು ಕೀಳಿಸುವಂತೆ ಸೂಚಿಸಿದ್ದರು. ಆದರೆ, ಕಲ್ಪನಾ ಅವರು ಹಲ್ಲು ತೆಗೆಸುವ ಪ್ರಯತ್ನಕ್ಕೆ ಮುಂದಾಗಿರಲಿಲ್ಲ.