ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (WestBengal) 20 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಘೋಷಣೆ ಮಾಡಿದ್ದಾರೆ. ಕೋಲ್ಕತ್ತಾದಲ್ಲಿನ 7ನೇ ಬೆಂಗಾಲ್ ಜಾಗತಿಕ ಉದ್ಯಮ ಸಮಾವೇಶದಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ರಿಲಯನ್ಸ್ ಇದುವರೆಗೆ ಸುಮಾರು 45,000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ.
ಹಾಗೆಯೇ ಮುಂದಿನ ಮೂರು ವರ್ಷಗಳಲ್ಲಿ ನಾವು 20 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹೂಡಿಕೆ ಮಾಡುವುದಾಗಿ ಘೋಷಿಸಿದರು. ದೂರಸಂಪರ್ಕ, ರೀಟೇಲ್ ಮತ್ತು ಜೈವಿಕ ಇಂಧನ ಕ್ಷೇತ್ರಗಳಲ್ಲಿ ಈ 20 ಸಾವಿರ ಕೋಟಿ ಹೂಡಿಕೆ ಮಾಡಲಾಗುವುದು. ನಾವು 5ಜಿ ತಂತ್ರಜ್ಞಾನವನ್ನು ರಾಜ್ಯದ ಮೂಲೆ ಮೂಲೆಗೆ ಒಯ್ಯುತ್ತಿದ್ದೇವೆ. ವಿಶೇಷವಾಗಿ ಗ್ರಾಮೀಣ ಭಾಗದ ಬಂಗಾಳವನ್ನು ಸಂಪರ್ಕಿಸಲಾಗುತ್ತಿದೆ. ನಾವು ಬಂಗಾಳದ ಬಹುತೇಕ ಭಾಗಗಳನ್ನು ಆವರಿಸಿದ್ದೇವೆ.
#WATCH | At the Bengal Global Business Summit, Reliance Industries chairman Mukesh Ambani says, "Reliance Foundation has taken up an ambitious project to renovate and restore the Kalighat temple in Kolkata. We are in the process of repairing the entire temple complex including… pic.twitter.com/xXJB1Ey0Iu
— ANI (@ANI) November 21, 2023
ಜಿಯೋ ನೆಟ್ವರ್ಕ್ ರಾಜ್ಯದ ಜನಸಂಖ್ಯೆಯ 98.8%ರಷ್ಟು ಮತ್ತು ಕೋಲ್ಕತ್ತಾ ಟೆಲಿಕಾಂ ವಲಯದಲ್ಲಿ 100%ರಷ್ಟು ಜನಸಂಖ್ಯೆಯನ್ನು ತಲುಪಿದೆ. ಜಿಯೋದ ಪ್ರಬಲ ನೆಟ್ವರ್ಕ್ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗದ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ಕೃಷಿಯನ್ನು ಉತ್ತೇಜಿಸುತ್ತದೆ ಎಂದರು. ರಿಲಯನ್ಸ್ ರೀಟೇಲ್ ಮುಂದಿನ ಎರಡು ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಸುಮಾರು 200 ಹೊಸ ಮಳಿಗೆಗಳನ್ನು ತೆರೆಯಲು ಯೋಜಿಸುತ್ತಿದೆ.
ಸದ್ಯಕ್ಕೆ ಬಂಗಾಳದಲ್ಲಿ ಸುಮಾರು 1000 ರಿಲಯನ್ಸ್ ಸ್ಟೋರ್ಗಳು ಕಾರ್ಯನಿರ್ವಹಿಸುತ್ತಿದ್ದು, ಅದು 1200ಕ್ಕೆ ಹೆಚ್ಚಾಗುತ್ತದೆ. ನೂರಾರು ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಮತ್ತು ಬಂಗಾಳದ ಸುಮಾರು 5.5 ಲಕ್ಷ ಕಿರಾಣಿ ಅಂಗಡಿಯವರು ನಮ್ಮ ರೀಟೇಲ್ ವ್ಯಾಪಾರದೊಂದಿಗೆ ಕೈ ಜೋಡಿಸಿದ್ದಾರೆ. ಹೊಸ ಮಳಿಗೆಗಳನ್ನು ತೆರೆಯುವುದರಿಂದ ಅವರಿಗೆ ಲಾಭವಾಗಲಿದೆ. ಪ್ರಭುಜಿ, ಮುಖ್ರೋಚಕ್, ಸಿಟಿ ಗೋಲ್ಡ್, ಬಿಸ್ಕ್ ಫಾರ್ಮ್ನಂತಹ ಬಂಗಾಳದ ಹಲವು ಪ್ರಾದೇಶಿಕ ಬ್ರ್ಯಾಂಡ್ಗಳನ್ನು ಉಲ್ಲೇಖಿಸಿದ ಅವರು, ರಿಲಯನ್ಸ್ ರೀಟೇಲ್ ಮೂಲಕ ನಾವು ಈ ಬ್ರ್ಯಾಂಡ್ಗಳನ್ನು ಇಡೀ ದೇಶದಾದ್ಯಂತ ಕೊಂಡೊಯ್ಯುತ್ತಿದ್ದೇವೆ ಎಂದು ಹೇಳಿದರು.