ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಕೋವಿಡ್ ಅಬ್ಬರ ಮುಂದುವರೆದಿದೆ. ಆತಂಕದ ವಾತಾವರಣ ಸೃಷ್ಟಿಯಾಗಿದೆ. ರಾಜ್ಯದ 10 ಸಚಿವರು ಮತ್ತು 20ಕ್ಕೂ ಹೆಚ್ಚು ಶಾಸಕರಿಗೆ ಕೊರೊನಾ ತಗುಲಿದೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಇಂದು ತಿಳಿಸಿದ್ದಾರೆ. ಈ ಬಗ್ಗೆ ಖಚಿತ ಪಡಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ತನಿಖೆಯ ನಂತರ ಸಚಿವರು ಮತ್ತು ಶಾಸಕರಿಗೆ ಕೋವಿಡ್ ತಗುಲಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕೋವಿಡ್ ದಿನೇದಿನೆ ಏರುತ್ತಿದೆ.
ಕೋವಿಡ್ ಸೋಂಕಿತರ ಸಂಖ್ಯೆ ಇದೇ ರೀತಿಯಾಗಿ ಹೆಚ್ಚುತ್ತಲೇ ಇದ್ದರೆ, ಸರ್ಕಾರ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ಹೇರಬೇಕಾ ಗಬಹುದು ಎಂದು ಹೇಳಿದರು. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಈಗಾಗಲೇ ಸೆಕ್ಷನ್-144 ಜಾರಿಗೊಳಿಸಲಾಗಿದೆ. ಡಿಸೆಂಬರ್ 30 ರಿಂದ ಜನವರಿ 7ರವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸೇರುವುದನ್ನು ನಿಷೇಧಿಸಲಾಗಿದೆ. ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದ ವೇಳೆ ನಿಯೋಜಿಸಲಾದ 35 ಪೊಲೀಸರು ಮತ್ತು ಸರ್ಕಾರಿ ನೌಕರರಿಗೆ ಕೋವಿಡ್ ದೃಢಪಟ್ಟಿದೆ.
